ಸು. ೪ನೆಯ ಶತಮಾನ. ಸುಪ್ರಸಿದ್ಧ ಜಾತಕಮಾಲೆಯನ್ನು ಬರೆದವ. ಅಶ್ವಘೋಷನೇ ಈತನೆಂದು ಟಿಬೆಟನ್ ಧಾರ್ಮಿಕ ಇತಿಹಾಸವನ್ನು ಬರೆದ ತಾರಾನಾಥ ಲಾಮಾ ವಾದಿಸುತ್ತಾನೆ. ಈ ಗ್ರಂಥದಲ್ಲಿ ಮೂವತ್ತ ನಾಲ್ಕು ಜಾತಕ ಕಥೆಗಳಿವೆ. ಇವು ಬೋಧಿಸತ್ತ್ವನ ಪಾರಮಿತಗಳನ್ನು ನಿರೂಪಿಸುವ ಕಥೆಗಳು. ಬಹುಮಟ್ಟಿಗೆ ಚರಿಯಾಪಿಟಕದಲ್ಲಿ ಅಡಕವಾಗಿರುವ ಹಳೆಯ ಕಥೆಗಳನ್ನೇ ಆರ್ಯಶೂರ ಆಯ್ದುಕೊಂಡು ತನ್ನ ಸಾರಸ್ವತ ಪ್ರತಿಭೆಯಿಂದ ಹೊಸರೂಪ ಕೊಟ್ಟಿದ್ದಾನೆ. ಪ್ರವಚನಕಾರರಿಗೆ ಉಪಯೋಗವಾಗುವ ಕಥೆಗಳನ್ನು ಅದೇ ದೃಷ್ಟಿಯಿಂದ ಹೆಣೆದಿದ್ದಾನೆ. ಕಥೆ ಹಳತಾದರೂ ಶೈಲಿ ಸೊಗಸಾಗಿದೆ. ಗದ್ಯ ಪದ್ಯ ಸೇರಿದ ಈ ಸಂಸ್ಕೃತ ಉತ್ತಮವಾಗಿದೆ, ಕಾವ್ಯರಸಭೂಯಿಷ್ಠವಾಗಿದೆ. ಇಲ್ಲಿಗೆ ಯಾತ್ರಿಕನಾಗಿ ಬಂದಿದ್ದ ಇತ್ಸಿಂಗ್ ಅವನ ಕಾಲದಲ್ಲಿ ಆರ್ಯಶೂರನ ಗ್ರಂಥ ನಾಡಿನಾದ್ಯಂತವೂ ಬಳಕೆಯಲ್ಲಿತ್ತೆಂದು ಹೊಗಳಿ ಬರೆದಿದ್ದಾನೆ. ೬ನೆಯ ಶತಮಾನದಲ್ಲಿ ನಿರ್ಮಿತವಾದ ಅಜಂತ ಭಿತ್ತಿಚಿತ್ರಗಳು ಕೆಲವು ಆರ್ಯಶೂರನ ಗ್ರಂಥದ ಪ್ರಸಂಗಗಳನ್ನು ನಿರೂಪಿಸುತ್ತವೆ. ಆರ್ಯಶೂರನ ಮಾತುಗಳನ್ನೇ ಆ ಚಿತ್ರಗಳ ಅಡಿಯಲ್ಲಿ ಬರೆದಿದ್ದಾರೆ. ಟಿಬೆಟನ್ ಸಂಪ್ರದಾಯ ದಲ್ಲಿ ಆರ್ಯಶೂರ ಜಾತಕಮಾಲೆಯಲ್ಲದೆ ಇನ್ನೂ ಐದು ಗ್ರಂಥಗಳನ್ನು ಬರೆದಿದ್ದಾನೆಂದು ನಂಬುತ್ತಾರೆ.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ